ಥಾನೇಸರ್
ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯಲ್ಲಿ ಸರಸ್ವತೀ ನದಿಯ ದಡದಲ್ಲಿರುವ ಒಂದು ಯಾತ್ರಾ ಸ್ಥಳ ಸ್ಥಾನೇಶ್ವರ ಅಥವಾ ಸ್ಥಾಣೇಶ್ವರ ಎಂಬುದು ಇದರ ಪ್ರಾಚೀನ ಹೆಸರು.  ಸರಸ್ವತೀ ಮತ್ತು ದೃಷದ್ವತೀ ನದಿಗಳ ಮಧ್ಯೆ ಸ್ಥಾಣೇಶ್ವರದ ಸುತ್ತಮುತ್ತಣ ಪ್ರದೇಶವೇ ಮಹಾಭಾರತದ ಕುರುಕ್ಷೇತ್ರವೆಂದು ಪ್ರತೀತಿ.  ಆರನೆಯ ಶತಮಾನದ ಹೊತ್ತಿಗೆ ಇದು ಪುಷ್ಯಭೂತಿ ಅರಸರ ರಾಜಧಾನಿಯಾಗಿತ್ತು.  ಪ್ರಭಾಕರ ವರ್ಧನನ ಮಗ ಹರ್ಷ ವರ್ಧನ ತನ್ನ ರಾಜಧಾನಿಯನ್ನು ಕನೌಜಿಗೆ ವರ್ಗಾಯಿಸಿದಾಗ ಇದರ ಪ್ರಾಮುಖ್ಯ ಸ್ವಲ್ಪ ಕಡಿಮೆಯಾಯಿತು.  634ರಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್ ತನ್ನ ಪ್ರವಾಸ ಕಥನದಲ್ಲಿ ಇದನ್ನು ಉಲ್ಲೇಖಿಸಿದ್ದಾನೆ.  ಘಜ್ನಿ ಮಹಮೂದನ ದಾಳಿಗೆ ತುತ್ತಾದ ಸ್ಥಳಗಳಲ್ಲಿ ಇದೂ ಒಂದು.

	ಘಜ್ನಿ ಮಹಮೂದನ ಅನಂತರ ಘೋರಿ ಮಹಮ್ಮದ್ ಭಾರತದಲ್ಲಿ ರಾಜ್ಯ ಸ್ಥಾಪನೆ ಮಾಡುವ ಉದ್ದೇಶದಿಂದ ಹಲವು ಬಾರಿ ದಂಡಯಾತ್ರೆ ಕೈಗೊಂಡ. ಇವನನ್ನು ಪೃಥ್ವೀರಾಜ ಎದುರಿಸಿದ.  ಇವರಿಬ್ಬರ  ನಡುವಣ ಮೊದಲನೆಯ ಸ್ಥಾನೇಶ್ವರ ಯುದ್ಧ ನಡೆದದ್ದು ಸ್ಥಾನೇಶ್ವರದಿಂದ 14 ಮೈ.  ದೂರದ ತರಾಯಿ ಎಂಬ ಸ್ಥಳದಲ್ಲಿ.  ಈ ಯುದ್ಧದಲ್ಲಿ ಘೋರಿ ಮಹಮ್ಮದ್ ಸೋತ.  ಪೃಥ್ವೀರಾಜನನ್ನು ಎದುರಿಸಿದ ಘೋರಿ ಮಾರನೆಯ ವರ್ಷವೇ ಮತ್ತೆ ದೊಡ್ಡ ಸೈನ್ಯದೊಡನೆ ಪೃಥ್ವೀರಾಜನನ್ನು ಎದುರಿಸಿದ.  ಇದು 2ನೆಯ ಸ್ಥಾನೇಶ್ವರ ಯುದ್ಧ.  ಭಾರತದ ಇತಿಹಾಸದ ಒಂದು ಮಹತ್ತ್ವದ ಘಟನೆಯಾದ ಈ ಯುದ್ಧದಲ್ಲಿ (1192) ಪೃಥ್ವೀರಾಜ ಸೋತ.  ಭಾರತದಲ್ಲಿ ಮುಸ್ಲಿಮರ ಆಳ್ವಿಕೆ ಪ್ರಾರಂಭವಾಯಿತು.

	ಭಾರತದ ಇತಿಹಾಸದ ಗತಿಯನ್ನು ಬದಲಿಸಿದ ಪಾಣಿಪತ್ತು ಯುದ್ಧಗಳು ನಡೆದದ್ದೂ ಸ್ಥಾನೇಶ್ವರದ ಸಮೀಪದಲ್ಲೇ.

(ಸಿ.ಕೆ.ವೈ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ